69ನೇ ಕನ್ನಡ ರಾಜ್ಯೋತ್ಸವ ಸಮಾರಂಭ - NOV 2024
ಬಿ ಬಿ ಯು ಎಲ್ ಜೈನ ವಿದ್ಯಾಲಯದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು
ಅದ್ದೂರಿಯಿಂದ ಆಚರಿಸಲಾಯಿತು. ಶಾಲಾ ಹಿರಿಯ ಪ್ರಾಂಶುಪಾಲರು, ಪ್ರಾಂಶುಪಾಲರು ಹಾಗೂ ಉಪ
ಪ್ರಾಂಶುಪಾಲರು ಉಪಸ್ಥಿತಿಯಲ್ಲಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು,
ಸಂಸ್ಕೃತಿ, ಘನತೆಯನ್ನು ಎತ್ತಿ ಹಿಡಿಯುವ ಹಾಡುಗಳಿಗೆ ನೃತ್ಯವನ್ನು ಮಾಡುವುದರ ಮೂಲಕ
ಮನರಂಜಿಸಿದರು. ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು,
ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿನಾಯಕ ಕೃಷ್ಣ ಗೋಕಾಕ್, ಯು ಆರ್ ಅನಂತಮೂರ್ತಿ, ಗಿರೀಶ್
ಕಾರ್ನಾಡ್, ಚಂದ್ರಶೇಖರ ಕಂಬಾರರ ವೇಷ ಭೂಷಣವನ್ನು ಧರಿಸಿ, ಅವರ ಪರಿಚಯವನ್ನು
ಪ್ರಸ್ತುತಪಡಿಸಲಾಯಿತು. ರಾಣಿ ಅಬ್ಬಕ್ಕ, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ,
ಒನಕೆ ಓಬವ್ವರ ಕುರಿತ ಸಂಭಾಷಣೆಯನ್ನು ಪ್ರಸ್ತುತಪಡಿಸಿ ಏಕಪಾತ್ರ ಅಭಿನಯವನ್ನು ಮಾಡಿ
ಮಕ್ಕಳಲ್ಲಿ ನಾಡ ಪ್ರೇಮವನ್ನು ಮೊಳಗುವಂತೆ ಮಾಡಿದರು.
ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಜ್ಞಾನಪೀಠ ಪ್ರಶಸ್ತಿ ವಿಜೇತರ ಸಾಧನೆಯ ಕುರಿತು ಹಾಡನ್ನು
ಹಾಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಪ್ರಭು ಕೆಂಪೇಗೌಡ ಅವರ ಕಿರು ನಾಟಕವನ್ನು ಪಿಪಿಟಿ
ಮೂಲಕ ಪ್ರದರ್ಶಿಸಿ ಕೆಂಪೇಗೌಡ ಅವರು ಬೆಂಗಳೂರು ನಿರ್ಮಾಣ ಮಾಡುವುದರಲ್ಲಿ ಪಟ್ಟ ಶ್ರಮವನ್ನು,
ಸಾಧನೆಯನ್ನು ಸರಳವಾಗಿ, ಅರ್ಥಪೂರ್ಣವಾಗಿ ಪ್ರಸ್ತುತಪಡಿಸಿದರು. ಕನ್ನಡ ಹಾಡುಗಳಿಗೆ
ನೃತ್ಯವನ್ನು ಮಾಡುವುದರ ಮೂಲಕ ನೆರೆದಿದ್ದ ಎಲ್ಲಾ ಶಿಕ್ಷಕ ವೃಂದ ಹಾಗೂ ಮಕ್ಕಳನ್ನು
ಮನರಂಜಿಸಿದರು.
ಹುಬ್ಬಳ್ಳಿ, ಮಂಗಳೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆ ಸೇರಿದಂತೆ ಪ್ರಾದೇಶಿಕ ಭಾಷೆಗಳ
ಮಹತ್ವ ಹಾಗೂ ಭಾಷಾ ಸೊಗಡನ್ನು ಆಯಾ ಭಾಷಾ ಶೈಲಿಯಲ್ಲಿಯೇ ಮಕ್ಕಳು ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಹಿರಿಯ ಪ್ರಾಂಶುಪಾಲರು ಹಾಗೂ ಪ್ರಾಂಶುಪಾಲರು ಕನ್ನಡ ನಾಡು-ನುಡಿ,
ಸಂಸ್ಕೃತಿ, ಐತಿಹಾಸಿಕತೆ ಕುರಿತು ಮಾತನಾಡಿ ಮಕ್ಕಳಲ್ಲಿ ಸ್ಪೂರ್ತಿಯನ್ನು ತುಂಬಿದರು.
×
hola